ಭಾವಾತಿರೇಕ 2 

ಕವಿಯಾದವ ತನ್ನ ಕೃತಿಯಲ್ಲಿ ಪ್ರೀತಿಯನ್ನೋ ದುಃಖವನ್ನೋ ಹೊಗಳಿಕೆಯನ್ನೋ ಹಿತಮಿತವಾಗಿ ಹೇಳದೆ ಭಾವೋದ್ವೆಗಕ್ಕೆ ಒಳಗಾಗಿ ಅಭಿವ್ಯಕ್ತಿ ನೀಡುವುದು (ಸೆಂಟಿಮೆಂಟಾಲಿಟಿ). ಭಾವಪ್ರಮುಖವಾದ ಬರವಣಿಗೆ ಸಾಹಿತ್ಯ, ಭಾವನಾಪ್ರಮುಖವಾದುದ್ದು ಶಾಸ್ತ್ರ ಎನಿಸುತ್ತದೆ. ಅದನ್ನು ಗ್ರಹಿಸುವಾಗ ಕೆಲವು ಸಹಸತ್ಯಾಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಬರಿ ಭಾವಗಳಿಂದಲೇ ಸಾಹಿತ್ಯ ಉದ್ಭವಿಸುವುದಿಲ್ಲ. ಭಾವನೆಗಳು ಅವಶ್ಯಕ. ಸ್ಪಷ್ಟವಾಗಿ ಹೇಳುವುದಾದರೆ, ಭಾವ ಭಾವನೆ ಎರಡೂ ಒಂದುಗೂಡಿಯೇ ಬರಬೇಕು. ಪ್ರೇಮ ದ್ವೇಷ ಮರುಕ ಭಯ ಭಕ್ತಿ ಬಂಧುವಾತ್ಸಲ್ಯ ಧೈರ್ಯ ಔದಾರ್ಯ ಮೊದಲಾದ ಉಜ್ಜ್ವಲ ಭಾವ ಭಾವನೆಗಳೇ ಸಾಹಿತ್ಯದ ತಳಪಾಯ ಮತ್ತು ಮೇಲಣ ಕಟ್ಟಡ. ಆದ್ದರಿಂದಲೇ ಕವಿಗೆ ಎಚ್ಚರಿಕೆಯೂ ಹಾಳತವೂ ಅತ್ಯಗತ್ಯ. ಮಿದುಳಿಗೆ ವಿಪರೀತ ಕೆಲಸ ಕೊಡುವ ಕವಿಗಳುಂಟು; ಸಂಖ್ಯೆ ಕಡಿಮೆ. ಹೃದಯಕ್ಕೆ ವಿಪರೀತ ಕೆಲಸ ಕೊಡುವ ಕವಿಗಳ ಮೊತ್ತ ಅತ್ಯಧಿಕ. ಸಂಯಮವನ್ನು ಬದಿಗೊತ್ತಿ ಮಿತಿಮೀರಿ ಶೋಕವನ್ನೊ ಅಂಜಿಕೆಯನ್ನೊ ಮೋಹವನ್ನೋ ಮೊರೆಯಿಡುವುದನ್ನೊ ಕೋಪವನ್ನೊ ಆಲಸ್ಯವನ್ನೊ ತೋಡಿಕೊಂಡಾಗ ಭಾವಾತಿರೇಕ ತಲೆ ಎತ್ತುತ್ತದೆ, ಜುಗುಪ್ಸೆ ಉಂಟಾಗುತ್ತದೆ.

	ಭಾವಾತಿರೇಕದಿಂದ ದೂಷ್ಯವಾಗುವ ಸಂದರ್ಭಗಳಲ್ಲಿ ಇವು ಮುಖ್ಯವಾದವು: 1 ಅಲ್ಪ ಪದಾರ್ಥದ ಸುತ್ತ ಅತಿಶಯ ಭಾವಾವೇಶವನ್ನು ಹರಡುವುದು. ಹುಲ್ಲು ಕಡ್ಡಿಯನ್ನು ದೊಡ್ಡದಿಮ್ಮಿಯನ್ನಾಗಿಸುವ ವಿಕಾರೋದ್ಯಮ ಅದು. 2 ಭಾವಗಳನ್ನು ಹೊರಸೂಸುವುದರಲ್ಲೇ ಮುಳುಗಿಬಿಡುವುದು. ಕಾವ್ಯದ ಇತರ ಅಂಗಗಳ ಜ್ಞಾಪಕ ಆಗ ಮಸುಳಿ, ಕಾವ್ಯದ ಸಮಕಟ್ಟು ಭಗ್ನವಾಗುವ ಸಂಭವವುಂಟು. 3 ಉಚಿತ ರೀತಿಯಲ್ಲಿ ರಾಗವಿರೂಪಣೆ ಎಸಗುವ ಬದಲು, ಪುನರುಕ್ತಿ ಅವಧಾರಣೆ ವಿಳಂಬ ಮುಂತಾದ ಅಟ್ಟಹಾಸ ಪ್ರದರ್ಶನದತ್ತ ಮನಸೋಲುವುದು. ನುಡಿದರೆ ಬಲ ಕಡಿಮೆ; ನುಡಿಯದಿದ್ದರೆ ಬಲ ಹೆಚ್ಚು ಎಂಬ ನಾಣ್ನುಡಿ ಅರ್ಥಪೂರ್ಣವಾದದ್ದು. ಕವಿ ಅದನ್ನು ಚಿಂತಿಸುತ್ತ ಕಾವ್ಯ ರಚನೆಯಲ್ಲಿ ಆಸಕ್ತನಾದರೆ ಒಳ್ಳೆಯದು. 4 ಹೃದಯ ಸ್ತಬ್ಧವಾಗಿ ರಾಗದ ಅಲೆಗಳು ಅಲ್ಪಸ್ವಲ್ಪ ಹೊರಳುತ್ತಿರುವಾಗಲೊ ಅಥವಾ ಹೃದಯ ಕೊಂಚ ಮಿಡಿದಾಡುತ್ತ ರಾಗದ ಅಲೆಗಳನ್ನು ಮಿತವಾಗಿ ಓಡಿಯಾಡಿಸುತ್ತಿರುವಾಗಲೋ ಉದ್ರೇಕ ಎದ್ದಿದೆ, ಸಪ್ಪಳ ಜೋರಾಗಿದೆ ಎಂದು ನಟನೆ ಮಾಡುವುದು. ಕವಿಗೆ ತಿಳಿಯದಂತೆ ಅಂಥ ನಟನೆ ನಡೆಯಬಹುದು; ಆದರೂ ಅದರಿಂದ ಕಾವ್ಯಸತ್ಯಕ್ಕೆ ಏಟು, ಕವಿಯ ಪ್ರಾಮಾಣಿಕತೆಯನ್ನು ಶಂಕಿಸಬೇಕಾಗುತ್ತದೆ. 5 ವಿಪರೀತಾರ್ಥದ ಅಯುಕ್ತ ಪದಗಳ ಉಪಯೋಗ, ಯಾವ ರಾಗವೇ ಆಗಲಿ ಅದು ಇಂಥ ಪ್ರಸಂಗದಲ್ಲಿ ಇಷ್ಟೇ ಇರಬೇಕು ಎಂಬುದನ್ನು ಅಳತೆಯಿಂದಲೊ ತೂಕದಿಂದಲೊ ಯಾರೂ ನಿಷ್ಕರ್ಷಿಸಿಕೊಡಲಾಗುವುದಿಲ್ಲ; ಔಚಿತ್ಯವೆಂಬ ಸಾಹಿತ್ಯ ನೇಮವಿದೆ; ಅದರ ಬೆಳಕಿನಿಂದ ಕವಿ ಪ್ರಮಾಣವನ್ನು ಅರಿತುಕೊಳ್ಳತಕ್ಕದ್ದು. ಪ್ರಮಾಣಕ್ಕೆ ತಕ್ಕ ಸೂಚಕಶಬ್ದಕ್ಕಾಗಿ ಅವನು ಹುಡುಕಾಡಿ ವಿಜಯಿಯಾಗಬೇಕು. 6 ವರ್ಣನೆಯ ವಸ್ತುವನ್ನು ಕಂಡು ಅತ್ಯಂತ ವ್ಯಾಮೋಹಗೊಂಡು ಒಂದ ಬಗೆಯ ಮೂರ್ಛಾವಸ್ಥೆಗೆ ಬೀಳುವುದು. ತಾಯಿ ಕುಳ್ಳಿರುತ್ತಿದ್ದ ಸುಖಾಸನ ಅವಳು ಸತ್ತಮೇಲೆ ಮಗಳಿಗೆ ಒಲುಮೆಯ ದ್ರವ್ಯವಾಗುವುದು ಸಾಮಾನ್ಯ; ಆ ಒಲುಮೆಯನ್ನು ಆಗಾಗ ಮಗಳು ತೋರಿಸಿದರೆ ಅದೇನೂ ತಪ್ಪಲ್ಲ. ಅದರೆ ಎಲೈಜ ಕುಕ್ ¨ರೆದಿರುವ ಹಳೆಯ ಸುಖಾಸನವೆಂಬ ಕವನ ಬೇಸರಗೊಳ್ಳದೆ ಓದುವುದಕ್ಕೆ ಆಗುವುದಿಲ್ಲ; ವಿಹಿತವೂ ಸರ್ಮವಿದಿತವೂ ಆದ ಅಕ್ಕರೆಯನ್ನು ಈಕೆಯೇತಕ್ಕೆ ಜಗಳಗಂಟಿಯಂತೆ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದಾಳೆ ಎಂದು ಅನಿಸದೆ ಇದರು. 7 ವಿಷಯಕ್ಕಿಂತಲೂ ವಿಷಯ ನಿರೂಪಣೆಗೆ ಪ್ರಾಧಾನ್ಯ ನೀಡುವುದು. 8 ಹಾಗೆಯೇ ತ್ರಾಣವಿಲ್ಲದ ಕ್ಷೀಣ ಭಾವವನ್ನು ಹಿಗ್ಗಲಿಸಿ ಹೆಚ್ಚು ಮಾಡುವ ಚಾಪಲ್ಯ. ಬಡಕಲು ದೇಹದವನಿಗೆ ದಪ್ಪ ನಿಲುವಂಗಿಯನ್ನು ತೊಡಿಸಬಹುದೆ? ತೀವ್ರರಾಗ ಕಲಾವಂತಿಕೆಯಿಂದ ಲಾಸ್ಯ ಹೂಡಿದರೆ ನೋಡಿ ಆನಂದಿಸಬಹುದು: ಕೇವಲ ರಾಗತೋರ್ಕೆಗೆ, ಹುಚ್ಚು ಹುಚ್ಚಾಗಿ ಕುಣಿದಾಡಿದರೆ ಕಣ್ಣಿಗೆ ಏನು ಹಿತ? 9 ಕವಿಗೆ ಯಾವಾಗಲೂ ಅಪಾಯ ತರುವ ಅಹಮಿಕೆ. ನಾನು ಹೇಗೆ ಅಳುತ್ತಿದ್ದೇನೆ, ಪ್ರೀತಿಸುತ್ತಿದ್ದೇನೆ, ಹೊಗಳುತ್ತಿದ್ದೇನೆ? ನನ್ನ ಹಾಗೆ ಮತ್ತೆ ಯಾರಾದರೂ ಅಳಬಲ್ಲರೆ, ಪ್ರೀತಿಸಬಲ್ಲರೆ ಹೊಗಳಬಲ್ಲರೆ? ಇಂಥ ಉದ್ದೇಶ ಪ್ರಕಟನೆ ಸಾಹಿತ್ಯದಲ್ಲಿ ಸಲ್ಲದು.,

	ಭಾವಾತಿರೇಕವನ್ನು ಒಂದು ಮನೋಜಾಡ್ಯವೆಂದು ಕರೆಯಬಹುದು. ಕಾವ್ಯ ನಿರ್ಮಾಣಕ್ಕೆ ಕವಿಯಲ್ಲಿ ಇರಬೇಕಾದ ಆರೋಗ್ಯ ಕೆಟ್ಟುಹೋದಾಗ, ವಿವೇಕ ವಿಚಕ್ಷಣೆ ಕುಂಟಾದಾಗ, ಆ ಜಾಡ್ಯ ಅವನನ್ನು ತಗಲುತ್ತದೆ. ಭಾವಾತಿರೇಕವನ್ನು ಗೊತ್ತು ಹಚ್ಚುವುದು ರಸಜ್ಞನಿಗೆ ಅಷ್ಟೇನೂ ಕಷ್ಟವಾಗದು. ಓದುತ್ತಿರುವಾಗ ಎಲ್ಲಿ ಅವನ ಮನಸ್ಸಿಗೆ ಸಂಕೋಚ ಉಂಟಾಗುತ್ತದೊ ಚಿತ್ತವನ್ನು ಕಿರಿಕಿರಿ ತಾಕುತ್ತದೊ ಎದೆಯ ಮೇಲೆ ಭಾರ ಹೇರಿದಂತಾಗುತ್ತದೊ ಅಲ್ಲಿ ರಾಗ ಅನುಚಿತವಾಗಿದೆ. ಅಸಹಜವಾಗಿದೆಯೆಂದು ಅವನು ನಿರ್ಧರಿಸಬಹುದು. ಆದರೆ ಇಲ್ಲಿಯವರೆಗೆ ಸಮರ್ಪಕ ಭಾವ, ಇಲ್ಲಿಂದಾಚೆ ಭಾವತಿರೇಕ ಎಂದು ಗೆರೆ ಎಳೆಯುವುದು ಯಾರಿಗೂ ಸಾಧ್ಯವಲ್ಲ. ಕಾಲ ದೇಶ ಸಂಸ್ಕøತಿಗಳ ಅಂತರವನ್ನು ವ್ಯತ್ಯಸ್ತ ಒತ್ತಡವನ್ನೂ ಮರೆತರೆ ಅನರ್ಥ. ದುಃಖ ಪ್ರದರ್ಶನವನ್ನೇ ತೆಗೆದುಕೊಳ್ಳೋಣ, ಪ್ರಾಚೀನ ಭವ್ಯ ಕಾವ್ಯಗಳಲ್ಲಿ ವೀರಾಗ್ರಣಿಗಳೂ ಕೂಡ ತಮ್ಮ ಆಪ್ತರ ನಿಧನಕ್ಕಗಿಯೊ ಮೂರ್ಛೆಗಾಗಿಯೊ ಬಿಕ್ಕಿ ಬಿಕ್ಕಿ ಅಳುತ್ತಾರೆ. ಬಿದ್ದು ಬಿದ್ದು ಹಲುಬುತ್ತಾರೆ. ಆ ವಿದ್ಯಮಾನ ನಮಗೆ ಭಾವಾತಿರೇಕದೆಡೆಗೆ ಬೇಸರ ತರಬಹುದು., ಬೇಸರಗೊಳ್ಳುವುದು ತರವಲ್ಲ. ಏಕೆಂದರೆ ಅದು ಭವ್ಯ ಕಾವ್ಯದ ರೀತಿ ಮಿಗಿಲಾಗಿ, ಆಗ ರೋದನ ಮತಪ್ರಕ್ರಿಯೆಯಾಗಿತ್ತು; ಅಳಿದವನಿಗೆ ಆ ಸಂಸ್ಕಾರ ನಿವೇದಿತವಾಗದಿದ್ದರೆ ಅವನ ಆತ್ಮಕ್ಕೆ ಉಳಿಗಾಲವಿರುತ್ತಿರಲಿಲ್ಲ, ಉಳಿದವರಿಗೆ ಅಮಂಗಳವಾಗುತ್ತಿತ್ತು. ಆತ್ಮಶ್ಮಾಘನೆಯೂ ಅಷ್ಟೆ.. ವೀರರು ಪದೇ ಪದೇ ತಾವು ಸಾಧಿಸಿದ ಸಾಹಸಗಳನ್ನು ಒಕ್ಕಣಿಸುತ್ತ, ತಮ್ಮ ಸಾಮಥ್ರ್ಯವನ್ನು ತಾವೇ ಡಂಗೂರ ಹೊಯ್ಯುತ್ತಾರೆ. ಇದೇನು, ಹೀಗೆ ಪ್ರತಾಪ ಕೊಚ್ಚುತ್ತಾರಲ್ಲ ಎನ್ನಲಾಗದು. ಅದೂ ಭವ್ಯಕಾವ್ಯಕ್ಕೆ ಬೇಕಾದ ಅವಶ್ಯಕವಾದ ಒಂದು ಪರಿಕರ ಎಂದು ಭಾವಿಸಬೇಕು. ಆದರೆ 19ನೆಯ ಶತಮಾನದ ಮಧ್ಯದಲ್ಲಿ ನವನಾಗರಿಕತೆಯ ಸನ್ನಿವೇಶದಲ್ಲಿ, ಟಿನಿಸನ್ ಕವಿ ತನ್ನ ಒಡನಾಡಿ ಹ್ಯಾಲಮನ ಮರಣಕ್ಕಾಗಿ ಕಟ್ಟಿದ ಅಷ್ಟೊಂದು ಉದ್ದದ ಪ್ರಗಾಥ ಅತಿಯೆಂದೇ ಹೇಳಬೇಕು.

	ಕೊನೆಯ ಮಾತು ಒಂದಿದೆ. ಮನುಷ್ಯನನ್ನು ನಡೆಸಿಕೊಂಡು ಹೋಗುವ ಶಕ್ತಿಗಳಲ್ಲಿ ಬುದ್ದಿ ವಿವೇಕಕ್ಕಿಂತ ರಾಗಾವೇಶಕ್ಕೆ ಮೇಲಣ ಸ್ಥಾನವಿದೆ. ಹೆಚ್ಚಿನ ದರ್ಪವಿದೆ. ಎಲ್ಲರನ್ನೂ ಭಾವಾತಿರೇಕದ ಗುಂಡಿಗೆ ಬೀಳಿಸಲು ಪ್ರಕೃತಿಮಾತೆ ಕಾತರಳಾಗಿರುವಂತಿದೆ. ಅವಳನ್ನು ಶತ್ರುವಾಗಿಸಿಕೊಳ್ಳದೆ ಸಮಯವಹಿಸಿ ಗಾಂಭೀರ್ಯ ತೋರುವುದು ಎಲ್ಲ ಕವಿಗಳ ಜವಾಬ್ದಾರಿ. 	
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ